ಭೂದೇವಿಯು ಎದೆ ಪ್ರೀತಿ ತೋರೆ
ವರುಣನಾಂದ ನೀ ಬಾಷ್ಪಧಾರೆ
ಶಿಖರಪರ್ವತ ವರನೀಡಿ ಕೃಪೆದೋರೆ
ಜೀವರಾಶಿಗೆ ನೀನು ಅಮೃತಧಾರೆ
ಸಾಗರನ ಒಡಲ ಕೃಪೆಯು ಮೇಲೇರೆ
ಆಕಾಶರಾಯನ ಅಭಯ ಇಳಿಧಾರೆ
ಸಕಲವೆಲ್ಲವನು ಮುತ್ತಿಕ್ಕಿ ನೀ ಸವರೆ
ಮೂಲಸೆಲೆ ಸೇರಿ ನದಿ ಜೀವಧಾರೆ
ಋಷಿ ಸಂಕುಲದ ನೀ ಸಂಚಯಿತ ತಪಧಾರೆ
ಮನುಜ ಸಂಕುಲದ ನೀ ಭಕ್ತಿ ಮನಸಾರೆ
ಭೂತಾಯಿಗೇ ವನಸಿರಿಯ ಕೃಪೆತೋರೆ
ಸಕಲವನು ಪೋಷಿಸುವ ನೀ ಸೃಷ್ಟಿಧಾರೆ
ಅನಾದಿಯಿಂ ನೀ ಪಾಪ ತೊಳೆಯುತ್ತಲಿರೆ
ಮನುಜ ಕಲ್ಮಷವೆಲ್ಲ ನಿನ್ನ ಒಡಲ ಸೇರೆ
ಅಲ್ಲಲ್ಲಿ ನಿನ್ನಡ್ಡ ಅಣೆಕಟ್ಟು ಜೋಡಿಸಿರೆ
ನಮ್ಮ ಮನದಾಳದಲಿ ಮಾತ್ರ ಪುಣ್ಯಧಾರೆ
ತಿರುತಿರುವಿನಲ್ಲೂ ಆಶ್ರಯವ ನೀ ತೋರೆ
ಬೀಳು ಬೀಳುವಲ್ಲೆಲ್ಲ ಅಭಿ಼ಷೇಕವಾಗಿರೆ
ಹರಿದು ಹರಿದಲ್ಲೆಲ್ಲ ಅನ್ನಪೂರ್ಣಾದೇವಿ
ತೃಷೆಯೇರಿದೆಲ್ಲರಿಗೆ ವಿಪುಲಜಲಧಾರೆ
ರೌದ್ರದಲಿ ಇಳಯುತ್ತ ತಪಸಿನಲಿ ಹರಿಯುತ್ತ
ಭಕುತಿಯಲಿ ತಿರುವುತ್ತ ನೀ ಪ್ರದಕ್ಷಿಣೆ
ಸಾಗರನ ಸೇರುವ ತವಕ ಹೆಚ್ಚಾಗಿರೆ
ವಿಪರೀತವಾಗಿ ಚಂಚಲಿತ ನೀರೆ
ಸಾಗರನ ತೆಕ್ಕೆಯಲಿ ಶಾಂತಿಯಲಿ ಕರಗುತ್ತ
ಇರುವನ್ನು ಮರೆವ ನೀ ಮುಕ್ತಿಧಾರೆ
ನಿನ್ನ ಜನುಮದ ಸಾರ್ಥಕದ ಕತೆಯಿನ್ನು
ನಮ್ಮ ಮನದಲ್ಲಿ ಸತತ ಭಾವಧಾರೆ
No comments:
Post a Comment