ನಿಮಿಷಗಳಲ್ಲಿ ಎಲ್ಲ ಬದಲಿಸಿದಿರಲ್ಲ
ಕ್ಷಣವೊಂದರಲ್ಲಿ ಜಗಮೊಗಚಿತಲ್ಲ
ಹಾಗೆ ಸುಮ್ಮನೆ ಎನ್ನುವ ಹಾಗೆ
ಇಲ್ಲಿ ಯಾವುದರ ಹಂಗಿಲ್ಲವೆನ್ನುವ ಹಾಗೆ
ಇದ್ಯಾವುದೂ ನಿಮ್ಮದಲ್ಲವೆನ್ನುವಂತೆ
ಜೀವೋಲ್ಲಂಘನ ಮಾಡಿದಿರಲ್ಲ
ತ್ಯಜಿಸಿ ನಡೆದೇಬಿಟ್ಟಿರಲ್ಲ
ಏನಿತ್ತು ಅಷ್ಟವಸರ
ಭೂಮಿಯ ಮೇಲಿನ್ನು ಧರ್ಮ ನೆಲೆಯಾಗಿಲ್ಲ
ನಾವಿನ್ನೂ ಸರಿಯಾಗಿ ನಡೆಯಲು ಕಲಿತೇ ಇಲ್ಲ
ಅಂಥ ಅಣ್ಣ ಇನ್ನೆಲ್ಲಿ ಸಿಕ್ಕಾರು
ಗೌರಿ ಪೂಜೆಗೆ ಸೀರೆ ತಪ್ಪುವುದುಂಟೆ
ನಾಗರಪಂಚಮಿಗೆ ಒಮ್ಮೆಯಾದರೂ ಭೇಟಿ
ವರ ಮಹಾಲಕ್ಷ್ಮಿ ಗೆ ಎಲ್ಲ ಬರಬೇಕು
ದಿಕ್ಕು ತೋಚದಾಗ ವಿಷ್ಣುನ ಒಂದು ಮಾತು ಕೇಳು
ನಡೆನಡೆಗೂ ದಾರಿ ತೋರಿದ ಧ್ರುವನಕ್ಷತ್ರ
ದಣಿವಾದಾಗ ಭೀಮಸವಾರಿ
ಜಗತ್ತಗೆ ವಸುಧೈವ ಕುಟುಂಬಕಂ
ನೀವು ಇದ್ದಿರಲ್ಲ
ಅದೇ ಒಳಗೊಂದು ಧೈರ್ಯವಿತ್ತು
ಎಲ್ಲ ಸರಿಯಿದೆ, ಸರಿಯಾಗುತ್ತದೆ
ಎನ್ನುವ ಭರವಸೆಯಿತ್ತು
ದೂರದವರು ಹತ್ತಿರವಾದರು
ಸಂತೆ ಸಮುದಾಯವಾಯ್ತು
ಅರಳಿಮರದ ಅಶ್ವತ್ಥ ಕಟ್ಟೆಯ
ಕೆಳಗೆ ನೆರಲಿನಲ್ಲಿ ಮಲಗಿದೆವು
ಮರಕೋತಿಯಾಡಿದೆವು
ಎಲೆದೂರಿ ಬಂದ ಸೂರ್ಯಕಿರಣದಲ್ಲಿ
ಬೆಳೆದು ದೊಡ್ಡವರಾದ ಜನರೆಷ್ಟೊ
ಬಂದು ಹೋದವರೆಷ್ಟೊ ಲೆಕ್ಕವಿಟ್ಟವರಾರು
ಹೆಸರಿಟ್ಟಷ್ಟಕ್ಕೆ ಅನ್ವರ್ಥವಾದಿರಿ
ವಿಷ್ಣು ಎಂದದಕ್ಕೆ ಪೊರೆದ ರಾಮನಾದಿರಿ
ಸುಮ್ಮನೆ ಬದುಕಿ ಆದಿರಿ ದಾರಿದೀಪ
ನೀವೆಷ್ಟು ದಿನವಿದ್ದರೂ ಇನ್ನಷ್ಟು ಬೇಕಿತ್ತು
ಮಾತುಮಾತಿಗೂ ನಿಮ್ಮದೇ ನೆನಪು
ನೀವೀಗ ಮನೆಮನೆಯ ದೇವರದೀಪ
No comments:
Post a Comment