ಋಷಿ ತಪಸ್ಸಿನ ಗಂಗಾವತರನಾ
ಕೃಷ್ಣ ಕೊಳಲಿನ ಯಮುನಾ ಗಾಯನಾ
ರಾಮಧರ್ಮಮನ ಸರಯೂ ಚೇತನಾ
ಕುಣಿಕುಣಿವ ನರ್ಮದೆಯ ಕೀರ್ತನಾ
ತಾಂಡವದ ಬ್ರಹ್ಮಪುತ್ರ ನರ್ತನಾ
ಜೀವ ದಾಹ ತೀರುವ ತುಂಗಾ ಪಾನಾ
ಹರಿದಲ್ಲೆಲ್ಲ ಪೊರೆವ ಕಾವೇರಿಯ ಭಾವನಾ
ಸೃಷ್ಟಿಸ್ಥಿತಿಲಯಗಳ ಸರಸ್ವತಿ ನಯನಾ
ಎಷ್ಟು ಬತ್ತಿಸಿದರೂ ಒಣಗಲಿಲ್ಲ
ಹುಡುಕಿದಷ್ಟೂ ಮೂಲ ಸುಲಭವಲ್ಲ
ಬಚ್ಚಲ ನೀರು ಹರಿಸಿದರೂ
ಮೂಲಸೆಲೆ ಸ್ಫಟಿಕ ಸ್ಪಷ್ಟವಿದೆಯಲ್ಲ
ದಿಕ್ಕು ಬದಲಿಸಿದಷ್ಟೂ
ಮತ್ತದೇ ದಿಕ್ಕು ಮತ್ತಷ್ಟು ವೇಗ
ಕಿರುದೊರೆಗಳಲ್ಲಿ ಹಂಚಿದರೋ
ಹರಿದಲ್ಲೆಲ್ಲ ಮಹಾಪಾತ್ರ ಆವೇಗ
ವಿಷಸುರಿದಷ್ಟೂ ದೈವಕೃಪೆ ಮಹಾಮಳೆ
ಹರಿವಿನಲ್ಲಿ ನಂಜುಂಡ ಈ ಮಹಾನದಿ
ಚೆಲ್ಲಿದ ರಕ್ತವೆಲ್ಲ ಒಂದು ಹರಿವಿನಲ್ಲೊ
ಇನ್ನೊಂದು ಬೀಳಿನಲ್ಲೊ ಕಳೆದು ಶುದ್ಧಿ
ಕಣ್ಕಟ್ಟು ಮಾಯೆ ಇವಳ ಎಷ್ಟು ಮುಚ್ಚುವುದು
ಹರಿವಿನಲ್ಲೆ ಇವಳಿರವು ಹೃದಯಕಾಣುವುದು
ಅಡ್ಡಗೋಡೆ ಸ್ಫೋಟಕ ಏನೆಷ್ಟು ಸಿಡಿವುದು
ಅದೊಂದು ಸೆಲೆ ಗುಪ್ತಗಾಮಿನಿ ಹರಿಯುತಿಹುದು
No comments:
Post a Comment