ಹೃದಯಕಾದ ಗಾಯ ಮನ ಕುಗ್ಗಿಸಲಿಲ್ಲ
ಹೃದಯವೇ ಹಿಗ್ಗಿ ಮಹಾಮನೆಯಾಯ್ತು
ಯಾರು ಬೇಕಾದರೂ ಯಾವಾಗಲಾದರೂ
ಒಳಬಂದು ಹೋಗಬಹುದು ಮತ್ತೆ ಬರುವುದಕೆ
ಒಳಬಂದವರಿಗಿರಲಿ ಇಣುಕಿದವರಿಗೂ
ಜೀವಾಮೃತ ಸಿಂಚನ ಸತತ ಸೆಳೆತ ನಿರಂತರ
ತಾಯ ಹೃದಯ ಬಯಸುವ ಮಗುವಿನಂತೆ
ಯಾತ್ರೆಯ ದಣಿವಾರಿಸುವ ತಂಗುದಾಣದಂತೆ
ಕುಣಿನಲಿದು ಆಟವಾಡುವ ಮೈದಾನದಂತೆ
ಎಲ್ಲ ನಮ್ಮವರಿಲ್ಲಿ ಇಡಿವರುಷದ ಜಾತ್ರೆಯಂತೆ
ಗುರುಗಳ ಮಹಿಮೆ ಜಯವಿತ್ತು ಶೀಲವಿತ್ತು
ಯಾವಕಾರಣದ ಹಂಗಿಲ್ಲದ ಪ್ರೀತಿಯಿತ್ತು
ಮುಖ್ಯಮಂತ್ರಿಗೂ ಮಗುವಿಗೂ ಅಂತರವಿಲ್ಲ
ಹಿರಣ್ಯಗರ್ಭದಂತರಾಳದ ನಿಮ್ಮ ಮುಗುಳ್ನಗು
ಒಮ್ಮೆ ಅದರ ಸ್ಪರ್ಶವಾದರೆ ಅದರಿಂದ
ಬಿಡುಗಡೆಯಿಲ್ಲ ಅದರ ಅವಶ್ಯಕತೆಯಿಲ್ಲ
ನಿಮಗೆಲ್ಲರೂ ಬೇಕು ಎಲ್ಲ ಬರಬೇಕು
ಒಳ್ಳೆಯದಾಗಲಿ ಎಲ್ಲರಿಗೂ ಎಲ್ಲರೂ
ಒಳ್ಳೆಯವರೇ ಎಲ್ಲೆಡೆ ಧರ್ಮವಿದೆ
ಇದೇ ನಿಮ್ಮ ತಾನ ಇದೇ ನಿಮ್ಮ ಧ್ಯಾನ
ಆಮನೆಯೀಗ ಬರಿ ಜಯನಗರವಲ್ಲ
ನಮ್ಮ ಮನಮೂಡಿರುವ ದೇವಮಂದಿರ
ಆಮನೆಗೆ ಸಾವಿರ ಕರುಳಬಳ್ಳಿ
ಜೀವಾಮೃತದಿ ಬೆಳೆದ ಮನ ಜನ ಸಾಗರ
ಆಮನೆಯ ನಿರ್ಮಾತೃ ನೀವೆ ಸರಿ
ನೀವಾ ಮನೆಯೇ ಆಗಿ ನೀವೆ ಮಂದಿರ
No comments:
Post a Comment