ಓ ಪರ್ವತರಾಜನೆ
ಅಚಲ ಬೃಹದಾಕಾರ ನೀ ಕಣ್ದುಂಬಿಬಂದೆ
ಕಿರಿಯ ನನ ಮನ ಹಿಗ್ಗಿ ಹಿರಿದಾಗಲೆಂದೆ
ಅಗೊ ನೋಡು ನಾ ಹೊರಟೆ ಜಗಗೆಲ್ಲಲೆಂದೆ
ಸೃಷ್ಟಿ ವಿಸ್ಮಯದಾಳ ನಾ ಮನಗಾಣಲೆಂದೆ
ಅಷ್ಡೆತ್ತರದಿ ನೀನಾದೆ ಮಾಚುಪೀಚು
ಎಷ್ಟು ಜನರ ಕರೆಸಿದೆ ಚೋಮೊಲುಂಗ್ಮ
ದಕ್ಷಿಣಕಗಸ್ತ್ಯ ಇಳಿದು ಹೋಗಲು ವಿಂಧ್ಯ
ಜೀವವೈವಿಧ್ಯಕಾದೆ ನೀ ಸಹ್ಯಾದ್ರಿಯು
ಬಿರುತಾಪ ಬಿಸಿಗೆ ನೀ ಉಲ್ಲಾಸ ತಾಣ
ಸಾಹಸದ ಗೆಲುವಿಗೆ ಸ್ಫೂರ್ತಿ ಚಿಲುಮೆ
ಭೂಮಿ ಆಕಾಶಗಳಿಗೆ ಸೇತುಬಂಧ
ದೈವ ಸಾಕ್ಷಾತ್ಕಾರ ನಿನ ಕ್ಷೇತ್ರ ಮಹಿಮೆ
ನಿನ್ನೊಡಲ ಬೇಗೆಯದೆ ಜ್ವಾಲಾಮುಖಿ
ನೀ ಮುಗಿಲಚುಂಬಿಸಲು ಮುಸಲಧಾರೆ
ನೀ ಚಲಿಸಬಯಸಲು ನದಿಯಹರಿಯಾದೆ
ನಿನ್ನಾಟ ಲೀಲೆಯೇ ಪ್ರಾಣಿಪಕ್ಷಿಗಳು
ಜಗವನಾಳುವ ಈಶನಿಗೆ ಕೈಲಾಸನು
ಮಂಥನದಿ ಅಮೃತಕೆ ಮಂದಾರನು
ಹಾರಿ ಲಂಕಯೆ ಸೇರಲು ಮಹೇಂದ್ರನು
ಮರಣದಿಂ ಜೀವಕ್ಕೆ ಗಂಧಮಾದನನು
ನಿನ್ನ ತಪಸಿನ ಫಲ ನಮಗೆ ವನದ ವೈವಿಧ್ಯ
ನಿನ ಸಂಕಲ್ಪ ಹೆಪ್ಪಾಗಿ ಕಲ್ಲು ಬಂಡೆಯದು
ಹತ್ತಿ ಇಳಿದರೆ ಒಮ್ಮೆ ಜೀವಕ್ಕೆ ಮರುಜನ್ಮ
ನೆಟ್ಟು ನೋಡುತ್ತಲೆ ಭಾವಪರಯಾತ್ರೆ
ನಿನ ಬೃಹದಾಕಾರ ಮುಗಿಲೆತ್ತರದ ಭವ್ಯ
ನಿನ ಮುಂದೆ ನಾ ಹುಲು ಮಾನವ-
-ನಾದರೂ ನನಗಿಲ್ಲ ಕೀಳರಿಮೆ ಭಾವ
ನನ್ನ ಒಳ ಮೂಡಿಸಿಹೆ ಧನ್ಯತೆಯ ಭಾವ
ಬುವಿಯಿಂದ ನಿನ್ನ ತುಟ್ಟ ತುದಿ ದಿಟ್ಟಿಸಲು
ಕೂಗಿ ಕರೆವುದು ನನ್ನ ಶರಣಾಗಲು
ತಪದಿ ಮುನ್ನಡೆಸಲು ಇಹದ ಕಾಯಕ
ಮನದಿ ಮೂಡುವುದು ದೇವಲೋಕ
No comments:
Post a Comment